Saturday, May 27, 2006

ಗೌಡರ ತುಟಿಯಂಚಿನಲ್ಲಿ ತುಂಟನಗೆ?

ಹಾಲಿ ಮಾಜಿ ಪ್ರಧಾನಿ ಡಿ ಗೌಡರಿಗೆ ಪತ್ರಕರ್ತರೆಂದರೆ ಅಷ್ಟಕಷ್ಟೆ. ಅವರ ಪ್ರಕಾರ ಪತ್ರಕರ್ತರೆಲ್ಲಾ ತಲೆಹರಟೆಗಳು. ಅದರಲ್ಲೂ ನನ್ನ ಹೆಸರೇ ತಲೆಹರಟೆ ಎಂದಿರುವಾಗ ಕೇಳಬೇಕೆ? ಅಂತು ಇಂತು ಕಷ್ಟಪಟ್ಟು ಸಂದರ್ಶನ ಪಡೆಯುವಷ್ಟರಲ್ಲಿ ನನ್ನ ತಲೆ ಹನ್ನೆರಡಾಣೆ ಆಗಿ 'ತಲೆಹರಟೆ'ಗೆ ತಲೆಯೇ ಇಲ್ಲ ಎನ್ನುವ ಹಾಗಾಗಿದೆ. ಆದರೆ ಸಂದರ್ಶನ ವೇಳೆ ಆಡಿದ ಮಾತುಗಳೆಲ್ಲಾ ಆಫ್ ದಿ ರೆಕಾರ್ಡ್!! ಆದರೂ ಧೈರ್ಯ ಮಾಡಿ ಸಂದರ್ಶನದ ಒಂದೆರಡು ತುಣುಕುಗಳನ್ನು ಇಲ್ಲಿ ನೀಡಿದ್ದೀನಿ.

ತಲೆಹರಟೆ: ಗೌಡ್ರೇ ನಿಮ್ಮ ಇದುವರೆಗಿನ ಮಹತ್ತರ ಸಾಧನೆ ಯಾವುದು?

ಗೌಡ್ರು: ಮಗನನ್ನು ಸಿ ಎಮ್ ಮಾಡಿದ್ದು. ಇದು ಆಫ್ ದಿ ರೆಕಾರ್ಡ್. ಪತ್ರಿಕೆಯಲ್ಲಿ ಪ್ರಕಟಿಸಬೇಡಿ.

ತಲೆಹರಟೆ: ನೀವು ಕೆಲವು ತಿಂಗಳ ಹಿಂದಿನವರೆಗೂ ಸರಾಸರಿ ದಿನಕ್ಕೊಂದು ಪತ್ರ ಬರೆಯುತ್ತಿದ್ದರಲ್ಲ. ಈಗೇಕೆ ನಿಮ್ಮ ಪತ್ರಗಳು ಅಪರೂಪ ಆಗಿಬಿಟ್ಟಿದೆ.

ಗೌಡ್ರು: ವಯಸ್ಸಾಯಿತು. ಪತ್ರ ಬರೆದು ಬರೆದು ಸುಸ್ತಾಗಿದ್ದೀನಿ. ಸ್ವಲ್ಪ ಸುಧಾರಿಸಿಕೊಳ್ಳೋಣ ಎಂದು ಸುಮ್ಮನಾಗಿದ್ದೀನಿ. ಹದಿನಾರು ತಿಂಗಳು ರೆಸ್ಟ್. ಆಮೇಲೆ ನೋಡಿ ಮತ್ತೆ ಪ್ರಾರಂಭ ಆಗುತ್ತೆ ನನ್ನ ಪತ್ರಾವಳಿ! (ಪತ್ರ ಹಾವಳಿ? ಆಡಳಿತ ಹಂಚಿಕೆ ಸೂತ್ರದ ಪ್ರಕಾರ ಇನ್ನು ಹದಿನಾರು ತಿಂಗಳ ನಂತರ ಮಂಡಿಊರಿ-ಯಡಿಯೂರಿ ಅಲ್ಲ-ಎಂಬುವವರು ಮುಖ್ಯ ಮಂತ್ರಿ ಆಗಲಿದ್ದಾರೆ....ಸಂದರ್ಶಕ).

ತಲೆಹರಟೆ: ನೀವು ಸೋನಿಯಾಗೂ ಪತ್ರ ಬರೆಯುತ್ತಿದ್ದರಲ್ಲಾ ಆಗ ನಿಮ್ಮ ಧರ್ಮಪತ್ನಿ ಏನು ಅನ್ನುತಿರಲ್ಲಿಲ್ಲವಾ?

ಗೌಡ್ರು: ..............................(ಗೌಡರ ತುಟಿಯಂಚಿನಲ್ಲಿ ತುಂಟನಗೆಯೊಂದು ಮಿಂಚಿ ಮಾಯವಾಯಿತು)

Sunday, May 21, 2006

ಭ್ರಷ್ಟಾಚಾರ ಕಾಣಿಸದಂತೆ 'ಕಾರ್ಯ' ನಿರ್ವಹಿಸಿ: ಮು ಮಂತ್ರಿ

ವರ್ಗಾವಣೆ 'ಜಾತ್ರೆ'ಯಲ್ಲಿ ತಿಂದುಂಡು ತೇಗುತ್ತಿರುವ ಭ್ರಷ್ಟಾಸುರನ ರೌದ್ರ ನರ್ತನದ ಬಗ್ಗೆ ವಿ.ಕ ಪತ್ರಿಕೆಯು 'ವರ್ಗ:ದುಡ್ಡು ಮಾಡೋರ ಸ್ವರ್ಗ' ಹೆಸರಿನ ಎಫ್ ಐ ಆರ್ ದಾಖಲಿಸಿದನ್ನು(ಮೇ ೧೭,೨೦೦೬) ಕಂಡು 'ಎಚ್ಚೆತ್ತು'ಕೊಂಡಿರುವ ಮಾನ್ಯ ಮು.ಮಂತ್ರಿ ಅಧಿಕಾರಿಗಳೊಂದಿಗೆ ತುರ್ತು ಸಮಾಲೋಚನ ಸಭೆಯನ್ನು ನಡೆಸಿ ವರ್ಗಾವಣೆ ವಿಚಾರದಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆಂದು ಅದೇ ಪತ್ರಿಕೆ ವರದಿ ಮಾಡಿದೆ(ಮೇ ೧೮,೨೦೦೬).

ಆದರೆ ಆ ಪತ್ರಿಕೆಯು ತನ್ನ ವರದಿಯಲ್ಲಿ ಸ್ಥಳ ಅಭವಾದಿಂದಲೋ ಅಥವ ಮುದ್ರರಾಕ್ಷಸನ ಹಾವಳಿಯಿಂದಲೋ ಬಹು ಮುಖ್ಯ ಮಾಹಿತಿಯನ್ನು ಕೈ ಬಿಟ್ಟು ಅಪೂರ್ಣ ವರದಿಯನ್ನು ನೀಡಿದೆ.

ಪ್ರಕಟವಾಗಿರುವ ವರದಿಯು "ವರ್ಗಾವಣೆ ವಿಚಾರದಲ್ಲಿ ಕಟ್ಟೆಚ್ಚರ ವಹಿಸುವಂತೆ ಮು ಮಂತ್ರಿ ಹೆಚ್.ಡಿ.ಕೆ.ಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ" ಎಂಬ ಸಾಲಿನೊಂದಿಗೆ ಪ್ರಾರಂಭವಾಗಿ, "ಭ್ರಷ್ಟಾಚಾರ ಕಂಡು ಬಂದರೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದರು" ಎಂಬ ಸಾಲಿನೊಂದಿಗೆ ಕೊನೆಗೊಳ್ಳುತ್ತದೆ.

ಆದರೆ ತಲೆಹರಟೆ ಎಂಬ ಲದ್ದೀಗಾರನ ಪ್ರಕಾರ ವಿ.ಕ ದಲ್ಲಿ ಪ್ರಕಟವಾಗಿರುವ ಮೂಲ ವರದಿಯ ಪ್ರಾರಂಭಿಕ ಸಾಲು ಹೀಗಿದೆ:"ವರ್ಗಾವಣೆಗೆ ಸಂಬಂಧಿಸಿದ ಒಂದೂ 'ಕೇಸು' ಸಹ 'ಹೊರಗಿನ'ವರಿಗೆ ಗೊತ್ತಾಗದಂತೆ ಕಟ್ಟೆಚ್ಚರವಹಿಸುವಂತೆ ಮು.ಮಂತ್ರಿ ಅಧಿಕಾರಿಗಳಿಗೆ 'ತಾಕೀತು' ಮಾಡಿದ್ದಾರೆ".ಕೊನೆಯ ಸಾಲು "ಭ್ರಷ್ಟಾಚಾರ ಕಂಡು ಬಂದರೆ 'ತಪ್ಪಿತಸ್ಥರ' ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಭ್ರಷ್ಟಾಚರ ಕಂಡು ಬಾರದಂತೆ 'ಕಾರ್ಯ' ನಿರ್ವಹಿಸುವಂತೆ ಸೂಚಿಸಲು ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದರು".

ಜೈ ಭ್ರಷ್ಟಾಸುರ!!!!!!!

Sunday, May 14, 2006

ನೂರು ದಿನ ಪೂರೈಸಿದ `ಸರ್ಕಾರ್' `ಸಿನಿಮಾ'!!!

ಎಲ್ಲಾ ಸಿನೆಮಾಗಳಲ್ಲಿ ಮಧ್ಯಂತರ ಇನ್ನೇನು ಒಂದೆರಡು ಕ್ಷಣಗಳಿರುವಾಗ ಕತೆಗೆ ಒಂದು ತಿರುವು ಬಂದು ವೀಕ್ಷಕರ ಕುತೂಹಲ ಕೆರಳಿಸುತ್ತದೆ. ಆದರೆ ಈ ಶನಿವಾರ(13.05.06) ನೂರು ದಿನ ಪೂರೈಸಿದ `ಸಿನಿಮಾ' ಮಾತ್ರ ವಿಭಿನ್ನ ರೀತಿಯದು. ಹೆಸರು `ಸರ್ಕಾರ್'. ಇದು ಪ್ರಾರಂಭ ಆಗಿದ್ದೆ ಒಂದು ವಿಚಿತ್ರ `ತಿರುವು' ನಿಂದ!

ಇನ್ನೊಂದು ವಿಶೇಷ ಎಂದರೆ ಈ (ವಿ)ಚಿತ್ರದಲ್ಲಿ ನಾಯಕ ಯಾರು ಖಳನಾಯಕನಾರು ಎಂಬ ಗೊಂದಲ ಪ್ರಾರಂಭದಿಂದಲೂ ಕಾಡುತಿದೆ. ಡೈಲಾಗ್ ವಿಷಯದಲ್ಲಿ ಎಲ್ಲಾ ಸಿನಿಮಾಗಳನ್ನು ಹಿಮ್ಮೆಟ್ಟಿಸುತ್ತದೆ. ಶೆಟ್ಟರ್ ಹೆಸರಿನ ಮಂತ್ರಿ ಪಾತ್ರವೊಂದು ಈ ಡೈಲಾಗ್ ಹೆಳುತ್ತೆ-"ಕಂದಾಯ ಇಲಾಖೆಯಲ್ಲಿ ಯಾರಾದರು ಲಂಚ ಕೇಳಿದರೆ ನೇರವಾಗಿ ಅವರ ವಿವರಗಳನ್ನು ನನ್ನ ಮೊಬೈಲ್ ಗೆ ಕರೆ ಮಾಡಿ ತಿಳಿಸಿ. ನಾನು ಕ್ರಮ ತೆಗೆದುಕೊಳ್ಳುತ್ತೇನೆ" ಎಂದು. ಪತ್ರಿಕೆಗಳ ಮೂಲಕ ಮೊಬೈಲ್ ನಂಬರ್ ಜನತಾಜನಾರ್ಧನ್ ಗೆ ದೊರೆಯುತ್ತದೆ. ಆದರೆ ಮುಂದೇನಾಯಿತು ಎಂದು ಕೇಳಬೇಡಿ. ಆ ಮೊಬೈಲಿಗೆ ಎಷ್ಟು ದೂರುಗಳು, ಅವುಗಳಲ್ಲಿ ಕ್ರಮ ತೆಗೆದುಕೊಂಡಿದ್ದೆಷ್ಟು ಎಂಬುದರ ಬಗ್ಗೆ ಒಂದಿಷ್ಟೂ ಮಾಹಿತಿ ಇಲ್ಲ.

"ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಕೊಡಲಾಗುವುದು" ಎಂಬುದು ಆಗಾಗ ಕೇಳಿ ಬರುವ ಡೈಲಾಗು.

ಇನ್ನೊಂದು ವಿಶೇಷ ಎಂದರೆ ಅ ಒಂದೇ ಚಿತ್ರಕ್ಕೆ ಹಲವು ನಿರ್ದೇಶಕರು!!!!!!

ಈ ಸಿನಿಮಾ ನೂರು ದಿನ `ಓಡಿ'ದ್ದರು ಸಹ ಬಾಕ್ಸ್ ಆಫೀಸ್ `ಕಮಾಯಿ' ಅಷ್ಟಕಷ್ಟೆ ಎಂಬ ಸೂಚನೆ ದೊರೆತಿದೆ. ಏಕೆಂದರೆ, ನೂರು ದಿನ ಪೂರೈಸಿದ ಸಂದರ್ಭದಲ್ಲಿ ಈ ಸಿನಿಮಾದ ಪ್ರಮುಖ ಪಾತ್ರ(ನಾಯಕ?) ತನ್ನ ಸಂದರ್ಶನದಲ್ಲಿ"ಈ ನೂರು ದಿನ ನನಗೆ ತೃಪ್ತಿ ನೀಡಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ವೆಬ್ ಅಲೆಮಾರಿಗಳೇ! ದಯವಿಟ್ಟು ಗಮನದಲ್ಲಿಡಿ;ಈ ಚಿತ್ರದ ಅವಧಿ 40 ತಿಂಗಳು!!!!!! ಆದರೆ ಅದಕ್ಕಿಂತ ಮುಂಚೆಯೂ ಮುಗಿಯಬಹುದು!

Thursday, May 11, 2006

ಅಹಾ! ಎಂತಹ ಹೊಂದಾಣಿಕೆ!!!!!!!!

ಕುಮಾರಿ ಜಯಲಲಿತಗೆ `ಕರುಣಾ'ಜನಕ ಸೋಲು, ಕರುಣಾನಿಧಿಗೆ `ಜಯ'ಮಾಲೆ. ಒಂದು ಅವಧಿಗೆ ಜಯಲಲಿತಾ, ಇನ್ನೊಂದು ಅವಧಿಗೆ ಕರುಣಾನಿಧಿ. ಇದು ಹಿಂದಿನಿಂದಲೂ ನಡೆದು ಬಂದ `ಸಂಪ್ರದಾಯ'. ಇದು ಯಾರ ಗೆಲವೂ ಅಲ್ಲ ಸೋಲೂ ಅಲ್ಲ; ಅದ್ಭುತ ಹೊಂದಾಣಿಕೆಯಷ್ಟೆ!!!!
ಒಂದು ಅವಧಿಗೆ ಇವರು ಆಡಳಿತ ನಡೆಸಿ ಬಾಚಿಕೊಳ್ಳುವುದು, ಇನ್ನೊಂದು ಅವಧಿಗೆ ಇನ್ನೊಬ್ಬರಿಗೆ ಅವಕಾಶ ಮಾಡಿಕೊಡುವುದು. ಈ ಹಿಂದಿನ ಐದು ವರ್ಷದಲ್ಲಿ `ಬಾಚಿ'ರುವುದನ್ನು ಸರಿಯಾಗಿ ಜೋಡಿಸಿ ಕೊಳ್ಳಬೇಕಲ್ಲ, ಅದಕ್ಕೆ ಈಗ ಜಯಲಲಿತಾಗೆ ಐದು ವರ್ಷ ಕಾಲಾವಕಾಶ ನೀಡಿರುವುದು. ಈಗ ಕರುಣಾನಿಧಿ ಬಾಚಿಕೊಳ್ಳುತ್ತಾರೆ. ಆಮೇಲೆ ಅವರಿಗೆ ಐದು ವರ್ಷ ರೆಸ್ಟ್. ಹೇಗಿದೆ ಭಲೇ ಜೋಡಿ?

Friday, May 05, 2006

ಮೊದಲ ಮಾತು

ಜನ ನನ್ನ ಗಂಭೀರ ಮಾತುಗಳನ್ನು ತಮಾಷೆಯಾಗಿ ಭಾವಿಸುತ್ತಾರೆ, ತಮಾಷೆ ಮಾತನ್ನು ಗಂಭಿರವಾಗಿ ಪರಿಗಣಿಸುತ್ತಾರೆ. ಅದೇ ನನ್ನ ಅಸಲಿ ಸಮಸ್ಯೆ!!!!!!!!!!
ಇರಲಿ. ನನ್ನ ಅಸಲಿ ಮತ್ತು ನಕಲಿ(?) ಸಮಸ್ಯೆಗಳನ್ನು ಚರ್ಚಿಸಲು ಅಲ್ಲ ಈ ಅಂತರ್ಜಾಲ ಪುಟ ಇರುವುದು...........

`ಮುಕ್ತ'ದ ಮುಕ್ತಾಯದ ಬಗ್ಗೆ ಒಂದು ಮುಕ್ತ ಅಭಿಪ್ರಾಯ


ಎಲ್ಲರ ಹಾಗೆ ನಾನೂ ಪ್ರತಿ ದಿನ ಟಿ ವಿ ನೋಡುತ್ತೆನೆ. ನನ್ನ ರೂಮಿನಿಂದ ಹೊರಗೆ ಬಂದಾಗ, ಕುಳಿತಾಗ, ಹೊರಗಿನಿಂದ ಮನೆಯೊಳಗೆ ಬಂದಾಗ, ನಿಂತಾಗ, ದೂರವಾಣಿಯಲ್ಲಿ ಹರಟೆ ಹೊಡೆಯುವಾಗ.......ಯಾವಾಗಲು ಟಿ ವಿ ನೋಡುತಿರುತ್ತೇನೆ. ನಮ್ಮಲ್ಲಿ ಎಲ್ಲರೂ ನೋಡುತ್ತಾರೆ. ಅಷ್ಟೇಕೆ, ನನ್ನ ಆರು ತಿಂಗಳ ಮಗಳೂ ಸಹ ನೋಡುತ್ತಾಳೆ! ಆದರೆ ಅದು ಯಾವಾಗಲು ಆಫ್ ಆಗಿರುತ್ತೆ!

ನಮ್ಮ ಮನೆಯಲ್ಲಿ ಟಿ ವಿ ಚಾಲು ಆಗುವುದು ರಾತ್ರಿ ಒಂಭತಕ್ಕೆ; ಅರ್ಧ, ಮುಕ್ಕಾಲು ಗಂಟೆಯ ಅವಧಿಗೆ ಮಾತ್ರ. ಪ್ರತಿದಿನ ರಾತ್ರಿ ಈ ಸಮಯಕ್ಕೆ ಯಾವುದೇ ಕೆಲಸ ಇಟ್ಟು ಕೊಂಡಿರುವುದಿಲ್ಲ. ಅದು `ಮುಕ್ತ' ಸಮಯ. ಈ ದಿನಚರಿಯಿಂದ ಮುಕ್ತಿ ಸಿಗಬೇಕೆಂದರೆ `ಮುಕ್ತ' ಧಾರವಾಹಿ ಮುಗಿಯಬೇಕು.

ಅಂದ ಹಾಗೆ `ಮುಕ್ತ' ಧಾರವಾಹಿ ಮುಕ್ತಾಯ ಮಾಡುವ ಮಾತನ್ನು ಟಿ ಎನ್ ಸೀತಾರಾಂ ಉರುಫ್ `ಸಿಎಸ್ಪಿ' ಯವರು ಪ್ರಸ್ತಾಪಿಸಿ ವೀಕ್ಷಕರ ಅಭಿಪ್ರಾಯ ಕೇಳಿದ್ದಾರೆ.

ನಾನು ಸೀತಾರಾಂ ಅವರ ಧಾರವಾಹಿಗಳನ್ನು ಮುಂಚಿನಿಂದಲೂ ನೋಡುತಿದ್ದೇನೆ. ನಾನು ನೋಡಿದ ಅವರ ಮೊದಲ ಧಾರವಾಹಿ ಸಣ್ಣ ಕತೆಗಳನ್ನು ಆಧರಿಸಿದಾಗಿತ್ತು. ಆಗ ಬಹುಶಃ ಒಂಭತ್ತನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಟಿ ವಿ ಕಾರ್ಯಕ್ರಮಗಳ ಬಗ್ಗೆ ಕಿಂಚಿತ್ತೂ ಆಸಕ್ತಿ ತೋರಿಸದ ನನ್ನ ತಾಯಿಗೆ `ಮಾಯ ಮೃಗ' ಅಚ್ಚುಮೆಚ್ಚಿನ ಧಾರವಾಹಿ ಆಗಿತ್ತು. ನನ್ನ ಈಗಿನ ಬಿಡುವಿಲ್ಲದ ದಿನಚರಿಯಲ್ಲಿ ಹೇಗಾದರು ಮಾಡಿ ಪ್ರತಿದಿನ `ಮುಕ್ತ'ಕ್ಕಾಗಿ ಅರ್ಧ ಗಂಟೆ ಕಾಲವಕಾಶ ಮಾಡಿಕೊಳ್ಳುತ್ತಿದ್ದೇನೆ. ಸೀತಾರಾಂ ನಿರ್ದೇಶನದ ಚಲನಚಿತ್ರ `ಮತದಾನ'ವನ್ನೂ ನೋಡಿದ್ದೇನೆ.

ಕೇವಲ ಅವರ ಧಾರವಾಹಿಗಳೇ ಅಲ್ಲ, ಅವರನ್ನೂ ಒಮ್ಮೆ ನೋಡಿದ್ದೇನೆ..ನಾನಾಗ ಹಾಸನದ ಟಿ ವಿ ಅಂಗಡಿಯೊಂದರಲ್ಲಿ ಸೇಲ್ಸ್ ಬಾಯ್ ಕೆಲಸ ಮಾಡುತ್ತಿದ್ದೆ.ಅವರ ಧಾರವಾಹಿಯೊಂದು ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. ಹೆಸರು ನೆನಪಿಲ್ಲ. ಅದರ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ. ಸೀತಾರಾಂ ತಂಡ ಚಿಕ್ಕಮಗಳೂರಿಗೆ ಹೋಗುವ ಮಾರ್ಗದಲ್ಲಿ ಹಾಸನ ತಲುಪಿದಾಗ ಸಂಜೆ ಏಳು ಮುವತ್ತು ಆಗಿತ್ತು. ಅದು ಧಾರವಾಹಿ ಪ್ರಸಾರದ ಸಮಯ. ಆಗ ನಾನಿದ್ದ ಟಿ ವಿ ಅಂಗಡಿಗೆ ತಮ್ಮ ತಂಡದ ಮೂರು-ನಾಲ್ಕು ಕಲಾವಿದರೊಂದಿಗೆ (ಅವರಲ್ಲಿ `ಸದಾನಂದ ಪಟೇಲ'ರೂ ಇದ್ದರು) ಬಂದು ಟಿ ವಿ ಹಾಕಿಸಿ ತಮ್ಮ ಧಾರವಾಹಿಯನ್ನು ವೀಕ್ಷಿಸಿದ್ದರು. ಆಗ ಅವರ ಆಟೋಗ್ರಾಫ್ ಸಹ ಪಡೆದುಕೊಂಡಿದ್ದೆ. ಅದೊಂದು ರೊಮಾಂಚನದ ಕ್ಷಣವಾಗಿತ್ತು. ಸಾಮಾನ್ಯವಾಗಿ ಅಂಗಡಿಯಲ್ಲಿ ಫ್ಯಾನ್ ಇದ್ದರು ನಮ್ಮ ಮಾಲೀಕರು ಬಳಸುತ್ತಿರಲಿಲ್ಲ. ಅಂದು ಅವರು ಸಹ ಅಂಗಡಿಯಲ್ಲಿರಲಿಲ್ಲ. ಅವರ ಪತ್ನಿ ಇದ್ದರು. ಸೀತಾರಾಂ ನವರ ಕೃಪೆಯಿಂದ ಅಂದು ಫ್ಯಾನ್ ಚಾಲು ಆಗಿತ್ತು!!!!!!!

ಧಾರವಾಹಿಯಿಂದ ಧಾರವಾಹಿಗೆ ಸೀತಾರಾಂ ಜನಪ್ರಿಯತೆ ಬೆಳೆಯುತ್ತಾ ಬಂದು ಈಗ ಅವರು ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದಾರೆ. ಸುಮಾರು ಆರು ನೂರು ಕಂತುಗಳ ನಂತರವೂ `ಮುಕ್ತ'ದ ಜನಪ್ರಿಯತೆ ಮಾಸಿಲ್ಲ. ಅರುಣಾಚಲ ಮೂರ್ತಿ ಕೊಲೆ ಪ್ರಕರಣ ಬಹಳ ದಿನಗಳಿಂದ ನಡೆಯುತ್ತಿದ್ದು `ಒಂದಿಷ್ಟು ಹೆಚ್ಚಾಯಿತು' ಎಂದೆನಿಸಿರುವುದನ್ನು ಬಿಟ್ಟರೆ ಮತ್ತೆಲ್ಲೂ `ಮುಕ್ತ' ಸಪ್ಪೆ ಆಗಿಲ್ಲ. `ಮುಕ್ತ' ನನ್ನ, ನಿಮ್ಮ, ಎಲ್ಲರ ಕತೆ. ಹಾಗಾಗಿ ಅದು ಎಂದಿಗೂ `ಸಾಕು' ಅನ್ನಿಸುವುದಿಲ್ಲ.

`ಮಾಯ ಮೃಗ', `ಮನ್ವಂತರ', `ಮುಕ್ತ' ಇವೆಲ್ಲಾ ಎಲ್ಲೋ ಒಂದು ಕಡೆ ಸಮಾನ ಎಂದನಿಸುತ್ತೆ. ಹಾಗಾಗಿ ಸೀತಾರಾಂ ನವರು `ಮುಕ್ತ' ಧಾರವಾಹಿಯು ಜನಪ್ರಿಯತೆಯ ಉತ್ತುಂಗದಲ್ಲಿ ಇರುವಾಗಲೇ ಅದನ್ನು ಒಂದು ತಾರ್ಕಿಕ ಅಂತ್ಯಕ್ಕೆ ತಂದು ನಿಲ್ಲಿಸಿ, ಬದಲಾವಣೆಗೋಸ್ಕರ ಹೊಸ ತರಹದ ಕಾರ್ಯಕ್ರಮ ನಿರ್ಮಿಸಿದರೆ ಚೆನ್ನಾಗಿರುತ್ತೆ. ಇದು ನನ್ನ ವೈಯುಕ್ತಿಕ ಅಭಿಪ್ರಾಯ.

ಜಾಗತೀಕರಣ ನಮ್ಮ ಮುಂದಿರುವ ಬಹು ದೊಡ್ಡ ಸವಾಲು. `ಕಾಣದೊಂದು ಹಸ್ತ' ನಮ್ಮನ್ನು ಹೇಗೆ ಸೆಳೆದುಕೊಳ್ಳುತ್ತಿದೆ, ಅದರ ಪರಿಣಾಮಗಳೇನು ಎಂಬುದನ್ನು `ಮುಕ್ತ'ದ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಜಾಗತಿಕರಣವನ್ನು ದಿಟ್ಟವಾಗಿ ಎದುರಿಸ ಬೇಕೆಂದರೆ ಮೊದಲು ನಾವು(ಜನತೆ) ಶಿಸ್ತು ಬದ್ದರಾಗಬೇಕು, ಪ್ರಾಮಾಣಿಕತೆ ಬೆಳೆಸಿಕೊಂಡು ಜಾಗೃತರಾಗಿರಬೇಕು. ನಮ್ಮಲ್ಲಿರುವ ಭ್ರಷ್ಟಾಚಾರವನ್ನು ಪೋಷಿಸಿಕೊಂಡು ಅಥವ ಅದನ್ನು ನಿರ್ಲಕ್ಷಿಸಿ ಜಾಗತಿಕರಣದ ಸವಾಲುಗಳನ್ನು ಎದುರಿಸಲು ಹೊರಟರೆ ನಾವು ಚಕ್ರವ್ಯೂಹದೊಳಗೆ ಸಿಲುಕಿಕೊಳ್ಳಬೇಕಾಗುತ್ತದೆ.ನಮ್ಮ ಅಸ್ತಿತ್ವನ್ನೇ ಕಳೆದುಕೊಳ್ಳುತ್ತೇವೆ. ಜಾಗತಿಕರಣವನ್ನು ನಮ್ಮ ಲಾಭಕ್ಕೆ ಬಳಸಿ ಕೊಳ್ಳಬೇಕೆಂದರೆ ನಮ್ಮಲ್ಲಿ ನಾವು ಶಿಸ್ತು, ಪ್ರಾಮಾಣಿಕತೆ, ಜಾಗೃತಿಯನ್ನು ಬೆಳಸಿಕೊಳ್ಳಬೇಕಾಗುತ್ತದೆ. ಇದಕ್ಕಿಂತ ಮುಂಚೆ ವ್ಯವಸ್ಥೆಯ ಬಗ್ಗೆ ನಮ್ಮಲ್ಲಿರುವ ಸಿನಿಕತನವನ್ನು ತೆಗೆದು ಹಾಕಬೇಕು. ನಮ್ಮನ್ನು ಆಳುವ, ನಿರ್ದೇಶಿಸುವವರನ್ನು ಪ್ರಶ್ನಿಸುವುದನ್ನು ಕಲಿಯಬೆಕು. ಈ ನಿಟ್ಟಿನಲ್ಲಿ ಸೀತಾರಾಂ ಅವರು ಹೊಸ ಪಾತ್ರವನ್ನು ವಹಿಸಬಹುದು.

ಸೀತಾರಾಂ ತಮ್ಮ ಮೊನಚು ಮಾತುಗಳಿಗೆ, ವಿಡಂಬನೆಗೆ, ಅಧ್ಯಯನಶೀಲತೆಗೆ, ಸಮಾಜದ ಅಂಕುಡೊಂಕುಗಳನ್ನು ಕಣ್ಣಿಗೆ ರಾಚುವಂತೆ ತೋರಿಸಲು ಸಮರ್ಥರು. ನಮ್ಮ ರಾಜಕಾರಣಿಗಳನ್ನು, ಆಳುವವರನ್ನು ಸದಾ ಎಚ್ಚರದ ಸ್ಥಿತಿಯಲ್ಲಿ ಇರಿಸಲು ಅವರು ಸಂದರ್ಶನಾಧರಿತ ( ಹಿಂದಿಯ `ಆಪ್ ಕಿ ಅದಾಲತ್ ', ಎನ್ ಡಿ ಟಿ ವಿಯ `ಬಿಗ್ ಫೈಟ್ ' ತರಹ) ಕಾರ್ಯಕ್ರಮಗಳನ್ನು ನಡೆಸಿಕೊಟ್ಟರೆ ಸೀತಾರಾಂ ಕನ್ನಡದ ಕರಣ್ ಥಾಪರ್ ಆಗಬಹುದು. ಅವರ ಪ್ರತಿಭೆ ಮತ್ತು ಜನಪ್ರಿಯತೆಯಿಂದಾಗಿ ಇಂತಹ ಕಾರ್ಯಕ್ರಮ ಯಶಸ್ವಿ ಆಗುವುದರಲ್ಲಿ ಸಂದೇಹ ಇಲ್ಲ.