Friday, June 09, 2006

ತಲೆಬುರುಡೆಗೆ ಪಿಂಕ್ ಸ್ಲಿಪ್?!

ಆತ್ಮೀಯ ನೆಟ್ ಅಲೆಮಾರಿಗಳೆ ಹಾಗು ಇತರರೆ,

ಬದಲಾವಣೆ ಈ ಜಗದ ನಿಯಮ. ಅನಾದಿಕಾಲದಿಂದ ಇಂದಿನವರೆಗೆ ಏನೇನೊ ಬದಲಾಗಿದೆ. ಆದರೆ ಬದಲಾಗದಿರುವುದು ಈ ನಿಯಮ ಮಾತ್ರ.

ಬದಲಾವಣೆ ಈ ಜಗದ ನಿಯಮ ಎನ್ನುವುದನ್ನು ಈಗಿನ ಆಧುನಿಕ ಕಾಲದವರು ಚೆನ್ನಾಗಿ ಮನದಟ್ಟು ಮಾಡಿಕೊಂಡಿದ್ದಾರೆ. ಹಾಗಾಗಿ ರಾಜಕಾರಣಿಯಿಂದ ಜನಸಾಮಾನ್ಯನವರೆಗೂ, ಮೊಟಾರು ಕಂಪನಿಯವರಿಂದ ಹಿಡಿದು ಮೊಬೈಲ್ ಕಂಪನಿಯವರವರೆಗೂ ಈ ನಿಯಮ ಚಾಚು ತಪ್ಪದೆ ಪಾಲಿಸಲಾಗುತಿದೆ. ಇವರಲ್ಲಿ ರಾಜಕಾರಣಿಗಳು ಮುಂಚೂಣಿಯಲ್ಲಿದ್ದಾರೆ. ಇವತ್ತು ಈ ಪಕ್ಷ, ನಾಳೆ ಇನ್ನೊಂದು. ಅದರ ನಂತರ ತಮ್ಮದೇ ಹೊಸತೊಂದು!

ಜನಸಾಮಾನ್ಯನ ವಿಷಯಕ್ಕೆ ಬಂದರೆ, ಇವತ್ತು Nokia2600 handset ಒಂದಿಷ್ಟು ದಿನಗಳ ನಂತರ ನೀಲಿ ಹಲ್ಲು(blue tooth) ಇರುವ ಮೊಬೈಲ್. ಒಂದಿಷ್ಟು ತಿಂಗಳ ನಂತರ ಅದಕ್ಕಿಂತ advanced set. ಒಂದಿಷ್ಟು ದಿನ Spice ಜತೆ ಚೆಲ್ಲಾಟ, ಮುಂದೆ Airtel ನೊಂದಿಗೆ ಚಕ್ಕಂದ. ಅದಾದ ಮೇಲೆ Hutch ನ ಸಹವಾಸ.

ಇನ್ನು ಜನ'ಅಸಾಮಾನ್ಯರ' ವಿಷಯ: ಇಂದು ಇವಳೊಂದಿಗೆ / ಇವನೊದಿಗೆ 'ಒಡನಾಟ', ನಾಳೆ ಇನ್ನ್ಯಾರಿಗೋ ಆ ಸ್ಥಾನ. ಮುಂದೊಂದು ದಿನ ಮತ್ತ್ಯಾರೊಂದಿಗೊ ಜೀವನ 'ಹಂಚಿಕೆ'!!!!

'ತಲೆಹರಟೆ'ಗೂ ಈ ನಿಯಮದಿಂದ ವಿನಾಯಿತಿ ಇಲ್ಲ. ನೀವೆಲ್ಲಾ ಈ ಬ್ಲಾಗ್ ನಿವೇಶನಕ್ಕೆ ಭೇಟಿ ಕೊಟ್ಟು, ಅಭಿಪ್ರಾಯಗಳನ್ನು ದಾಖಲಿಸಿ,ಮೆಚ್ಚುಗೆಯ ಮಾತನ್ನು ಆಡಿ ಪ್ರೋತ್ಸಾಹಿಸಿದ್ದೀರಿ. ಇದಕ್ಕೆ ನಾನು ನಿಮಗೆ ಚಿರಋಣಿ. ಇಲ್ಲಿ ಪಕ್ಕದಲ್ಲಿರುವ ತಲೆಬುರುಡೆ ಇಷ್ಟು ದಿನಗಳ ನಂತರ ಅದೇಕೊ irritating  ಅನ್ನಿಸುತ್ತಿದೆ. ಇಷ್ಟು ದಿನ ಈ ನಿವೇಶನದ ಮೇಲೆ ಯಾರ 'ದೃಷ್ಟಿಯೂ ಬೀಳದಂತೆ' ನೋಡಿಕೊಂಡಿದಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿ ಒಂದು ಪಿಂಕ್ ಸ್ಲಿಪ್ ನೀಡಬೇಕೆಂದುಕೊಂಡಿದ್ದೇನೆ. ನನಗೆ ಇದರ ಬಗ್ಗೆ ನಿಮ್ಮ ಅಭಿಪ್ರಾಯದ ತೀವ್ರ ಅವಶ್ಯಕತೆ ಇದೆ. ಈ ತಲೆಬುರುಡೆ ಇಲ್ಲಿರುವುದರಿಂದ ನಿಮಗೇನು ಅನ್ನಿಸಿದೆ, ಇದನ್ನು ಬದಲಾಯಿಸಬೇಕಾ ಅಥವ ಅದರಪಾಡಿಗೆ ಅದನ್ನು ಅಲ್ಲಿಯೇ ಬಿಡಬೇಕಾ? ಎಂದು ತಿಳಿಸಬೇಕಾಗಿ ವಿನಂತಿ.

ಇಂತಿ
ತಲೆಹರಟೆ

Tuesday, June 06, 2006

ಆಷ್ಟ್ರೇಲಿಯನ್ನರು: ಭಾರತದ ಜನಸಂಖ್ಯೆ ಹೆಚ್ಚಳಕ್ಕೆ ಕಾರಣರು

ತಲೆಹರಟೆ ಹೆಸರಿನ ಈ ಲದ್ದಿಗಾರನಿಗೆ ಬಹಳ ಸಂತೋಷವಾಗಿದೆ. ತನ್ನ ಗಂಭೀರ ಮಾತುಗಳನ್ನು ತಮಾಷೆಯಾಗಿ, ತಮಾಷೆ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದು ಸಿಕ್ಕಸಿಕ್ಕವರೆಲ್ಲಾ ಬಳಿ ಗೊಣಗುತ್ತಿದ್ದವನಿಗೆ ಇತ್ತಿಚಿಗೆ ಸಿಕ್ಕ ಪುಟ್ಟ ಸುದ್ಧಿಯೊಂದು ಈ ಸಂತೋಷಕ್ಕೆ ಕಾರಣ.

ಪೀಟರ್ ಕಾಸ್ಟಿಲ್ಲೊ ಎಂಬ ಆಸ್ಟ್ರೇಲಿಯದ ಪ್ರಮುಖ ವ್ಯಕ್ತಿ ಒಬ್ಬ ೧೯೯೨ ರಲ್ಲಿ ಆಸ್ಟ್ರೆಲಿಯನ್ ಜನತೆಯನ್ನು ಕುರಿತು "ದಂಪತಿಗಳು ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯಬೇಕು. ಒಂದು ಮಗು ಪಪ್ಪನಿಗೆ, ಒಂದು ಮಮ್ಮಿಗೆ ಇನ್ನೊಂದು ದೇಶಕ್ಕೆ.." ಎಂದು ತಮಾಶೆಗೆ ಹೇಳಿದ ಮಾತು ಈಗ ಗಂಭೀರ ಸಮಸ್ಯೆ ಉಂಟುಮಾಡಿದೆ!!

೧೯೯೨ ರಿಂದ ಈಚೆಗೆ ೨೦೦೫ರಲ್ಲಿ ಮೊದಲಬಾರಿಗೆ ೨೬೧೪೦೦ ಮಕ್ಕಳು ಇಲ್ಲಿ ಜನಿಸಿದ್ದಾರೆ. ಇದು ಅಲ್ಲಿಯ ಸರಕಾರಕ್ಕೆ ತಲೆನೊವಾಗಿ ಪರಿಣಮಿಸಿದೆ. ಹೀಗಾಗಿ ಅಲ್ಲಿಯ ಸರ್ಕಾರ "ರಾಷ್ಟ್ರದ ಹಿತದೃಷ್ಟಿಯಿಂದ ಹಾಗು ರಾಷ್ಟ್ರ ಪ್ರೇಮದ ಸಲುವಾಗಿ ಒಂದೇ ಮಗು ಪಡೆಯಿರಿ" ಎಂದು ತನ್ನ ಜನತೆಯಲ್ಲಿ ವಿನಂತಿಸಿಕೊಂಡಿದೆ.

ಈ ಮಧ್ಯೆ,ಆಷ್ತ್ರೇಲಿಯನ್ ಜನತೆ ತನ್ನ ತಮಾಷೆ ಮಾತನ್ನು ಇಷ್ಟು ಗಂಭೀರವಾಗಿ ತೆಗೆದುಕೊಡಿರುವುದು ತನಗೆ ಆಶ್ಚರ್ಯವಾಗಿದೆ ಎಂದು ಪೀಟರ್ ಕಾಸ್ಟಿಲ್ಲೊ ಹೇಳಿಕೊಂಡಿದ್ದಾನೆ. ಆಶ್ಟ್ರೇಲಿಯನ್ ಸರ್ಕಾರದ 'ಒಂದೇ ಮಗು ಸಾಕು' ಎಂಬ ಗಂಭೀರ ಕರೆಯನ್ನು ಅಲ್ಲಿಯ ಜನ ತಮಾಷೆ ಎಂದು ಭಾವಿಸದಿರಲಿ ಎಂಬುದು ತಲೆಹರಟೆಯ ಆಶಯ.

(೨೦೦೫ ರಲ್ಲಿ ಭರತದ ಜನಸಂಖ್ಯೆ ಎಂದಿಗಿಂತ 'ಅತಿ' ಹೆಚ್ಚಾಗಿದ್ದರೆ ಅದಕ್ಕೆ ಭಾರತಿಯರಾದ ನಾವು ಕಾರಣರಲ್ಲ! ಏಕೆಂದರೆ  ಜನಸಂಖ್ಯಾ ತಜ್ಞರ ಪ್ರಕಾರ ಭಾರತದ ಜನಸಂಖ್ಯೆಗೆ ಪ್ರತಿವರ್ಷ ಒಂದು ಆಸ್ಟ್ರೇಲಿಯ ಸೇರ್ಪಡೆಯಾಗುತ್ತಿದೆಯಂತೆ. ಹಾಗಾಗಿ ಆಶ್ತ್ರೇಲಿಯದ ಜನಸಂಖ್ಯೆ ಹೆಚ್ಚಾದರೆ ಸಹಜವಾಗಿ ಭಾರತದ ಜನಸಂಖ್ಯೆಯೂ ಅಷ್ಟೇ ಹೆಚ್ಚಬೆಕಲ್ಲವೇ?)