Friday, May 05, 2006

`ಮುಕ್ತ'ದ ಮುಕ್ತಾಯದ ಬಗ್ಗೆ ಒಂದು ಮುಕ್ತ ಅಭಿಪ್ರಾಯ


ಎಲ್ಲರ ಹಾಗೆ ನಾನೂ ಪ್ರತಿ ದಿನ ಟಿ ವಿ ನೋಡುತ್ತೆನೆ. ನನ್ನ ರೂಮಿನಿಂದ ಹೊರಗೆ ಬಂದಾಗ, ಕುಳಿತಾಗ, ಹೊರಗಿನಿಂದ ಮನೆಯೊಳಗೆ ಬಂದಾಗ, ನಿಂತಾಗ, ದೂರವಾಣಿಯಲ್ಲಿ ಹರಟೆ ಹೊಡೆಯುವಾಗ.......ಯಾವಾಗಲು ಟಿ ವಿ ನೋಡುತಿರುತ್ತೇನೆ. ನಮ್ಮಲ್ಲಿ ಎಲ್ಲರೂ ನೋಡುತ್ತಾರೆ. ಅಷ್ಟೇಕೆ, ನನ್ನ ಆರು ತಿಂಗಳ ಮಗಳೂ ಸಹ ನೋಡುತ್ತಾಳೆ! ಆದರೆ ಅದು ಯಾವಾಗಲು ಆಫ್ ಆಗಿರುತ್ತೆ!

ನಮ್ಮ ಮನೆಯಲ್ಲಿ ಟಿ ವಿ ಚಾಲು ಆಗುವುದು ರಾತ್ರಿ ಒಂಭತಕ್ಕೆ; ಅರ್ಧ, ಮುಕ್ಕಾಲು ಗಂಟೆಯ ಅವಧಿಗೆ ಮಾತ್ರ. ಪ್ರತಿದಿನ ರಾತ್ರಿ ಈ ಸಮಯಕ್ಕೆ ಯಾವುದೇ ಕೆಲಸ ಇಟ್ಟು ಕೊಂಡಿರುವುದಿಲ್ಲ. ಅದು `ಮುಕ್ತ' ಸಮಯ. ಈ ದಿನಚರಿಯಿಂದ ಮುಕ್ತಿ ಸಿಗಬೇಕೆಂದರೆ `ಮುಕ್ತ' ಧಾರವಾಹಿ ಮುಗಿಯಬೇಕು.

ಅಂದ ಹಾಗೆ `ಮುಕ್ತ' ಧಾರವಾಹಿ ಮುಕ್ತಾಯ ಮಾಡುವ ಮಾತನ್ನು ಟಿ ಎನ್ ಸೀತಾರಾಂ ಉರುಫ್ `ಸಿಎಸ್ಪಿ' ಯವರು ಪ್ರಸ್ತಾಪಿಸಿ ವೀಕ್ಷಕರ ಅಭಿಪ್ರಾಯ ಕೇಳಿದ್ದಾರೆ.

ನಾನು ಸೀತಾರಾಂ ಅವರ ಧಾರವಾಹಿಗಳನ್ನು ಮುಂಚಿನಿಂದಲೂ ನೋಡುತಿದ್ದೇನೆ. ನಾನು ನೋಡಿದ ಅವರ ಮೊದಲ ಧಾರವಾಹಿ ಸಣ್ಣ ಕತೆಗಳನ್ನು ಆಧರಿಸಿದಾಗಿತ್ತು. ಆಗ ಬಹುಶಃ ಒಂಭತ್ತನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಟಿ ವಿ ಕಾರ್ಯಕ್ರಮಗಳ ಬಗ್ಗೆ ಕಿಂಚಿತ್ತೂ ಆಸಕ್ತಿ ತೋರಿಸದ ನನ್ನ ತಾಯಿಗೆ `ಮಾಯ ಮೃಗ' ಅಚ್ಚುಮೆಚ್ಚಿನ ಧಾರವಾಹಿ ಆಗಿತ್ತು. ನನ್ನ ಈಗಿನ ಬಿಡುವಿಲ್ಲದ ದಿನಚರಿಯಲ್ಲಿ ಹೇಗಾದರು ಮಾಡಿ ಪ್ರತಿದಿನ `ಮುಕ್ತ'ಕ್ಕಾಗಿ ಅರ್ಧ ಗಂಟೆ ಕಾಲವಕಾಶ ಮಾಡಿಕೊಳ್ಳುತ್ತಿದ್ದೇನೆ. ಸೀತಾರಾಂ ನಿರ್ದೇಶನದ ಚಲನಚಿತ್ರ `ಮತದಾನ'ವನ್ನೂ ನೋಡಿದ್ದೇನೆ.

ಕೇವಲ ಅವರ ಧಾರವಾಹಿಗಳೇ ಅಲ್ಲ, ಅವರನ್ನೂ ಒಮ್ಮೆ ನೋಡಿದ್ದೇನೆ..ನಾನಾಗ ಹಾಸನದ ಟಿ ವಿ ಅಂಗಡಿಯೊಂದರಲ್ಲಿ ಸೇಲ್ಸ್ ಬಾಯ್ ಕೆಲಸ ಮಾಡುತ್ತಿದ್ದೆ.ಅವರ ಧಾರವಾಹಿಯೊಂದು ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. ಹೆಸರು ನೆನಪಿಲ್ಲ. ಅದರ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ. ಸೀತಾರಾಂ ತಂಡ ಚಿಕ್ಕಮಗಳೂರಿಗೆ ಹೋಗುವ ಮಾರ್ಗದಲ್ಲಿ ಹಾಸನ ತಲುಪಿದಾಗ ಸಂಜೆ ಏಳು ಮುವತ್ತು ಆಗಿತ್ತು. ಅದು ಧಾರವಾಹಿ ಪ್ರಸಾರದ ಸಮಯ. ಆಗ ನಾನಿದ್ದ ಟಿ ವಿ ಅಂಗಡಿಗೆ ತಮ್ಮ ತಂಡದ ಮೂರು-ನಾಲ್ಕು ಕಲಾವಿದರೊಂದಿಗೆ (ಅವರಲ್ಲಿ `ಸದಾನಂದ ಪಟೇಲ'ರೂ ಇದ್ದರು) ಬಂದು ಟಿ ವಿ ಹಾಕಿಸಿ ತಮ್ಮ ಧಾರವಾಹಿಯನ್ನು ವೀಕ್ಷಿಸಿದ್ದರು. ಆಗ ಅವರ ಆಟೋಗ್ರಾಫ್ ಸಹ ಪಡೆದುಕೊಂಡಿದ್ದೆ. ಅದೊಂದು ರೊಮಾಂಚನದ ಕ್ಷಣವಾಗಿತ್ತು. ಸಾಮಾನ್ಯವಾಗಿ ಅಂಗಡಿಯಲ್ಲಿ ಫ್ಯಾನ್ ಇದ್ದರು ನಮ್ಮ ಮಾಲೀಕರು ಬಳಸುತ್ತಿರಲಿಲ್ಲ. ಅಂದು ಅವರು ಸಹ ಅಂಗಡಿಯಲ್ಲಿರಲಿಲ್ಲ. ಅವರ ಪತ್ನಿ ಇದ್ದರು. ಸೀತಾರಾಂ ನವರ ಕೃಪೆಯಿಂದ ಅಂದು ಫ್ಯಾನ್ ಚಾಲು ಆಗಿತ್ತು!!!!!!!

ಧಾರವಾಹಿಯಿಂದ ಧಾರವಾಹಿಗೆ ಸೀತಾರಾಂ ಜನಪ್ರಿಯತೆ ಬೆಳೆಯುತ್ತಾ ಬಂದು ಈಗ ಅವರು ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದಾರೆ. ಸುಮಾರು ಆರು ನೂರು ಕಂತುಗಳ ನಂತರವೂ `ಮುಕ್ತ'ದ ಜನಪ್ರಿಯತೆ ಮಾಸಿಲ್ಲ. ಅರುಣಾಚಲ ಮೂರ್ತಿ ಕೊಲೆ ಪ್ರಕರಣ ಬಹಳ ದಿನಗಳಿಂದ ನಡೆಯುತ್ತಿದ್ದು `ಒಂದಿಷ್ಟು ಹೆಚ್ಚಾಯಿತು' ಎಂದೆನಿಸಿರುವುದನ್ನು ಬಿಟ್ಟರೆ ಮತ್ತೆಲ್ಲೂ `ಮುಕ್ತ' ಸಪ್ಪೆ ಆಗಿಲ್ಲ. `ಮುಕ್ತ' ನನ್ನ, ನಿಮ್ಮ, ಎಲ್ಲರ ಕತೆ. ಹಾಗಾಗಿ ಅದು ಎಂದಿಗೂ `ಸಾಕು' ಅನ್ನಿಸುವುದಿಲ್ಲ.

`ಮಾಯ ಮೃಗ', `ಮನ್ವಂತರ', `ಮುಕ್ತ' ಇವೆಲ್ಲಾ ಎಲ್ಲೋ ಒಂದು ಕಡೆ ಸಮಾನ ಎಂದನಿಸುತ್ತೆ. ಹಾಗಾಗಿ ಸೀತಾರಾಂ ನವರು `ಮುಕ್ತ' ಧಾರವಾಹಿಯು ಜನಪ್ರಿಯತೆಯ ಉತ್ತುಂಗದಲ್ಲಿ ಇರುವಾಗಲೇ ಅದನ್ನು ಒಂದು ತಾರ್ಕಿಕ ಅಂತ್ಯಕ್ಕೆ ತಂದು ನಿಲ್ಲಿಸಿ, ಬದಲಾವಣೆಗೋಸ್ಕರ ಹೊಸ ತರಹದ ಕಾರ್ಯಕ್ರಮ ನಿರ್ಮಿಸಿದರೆ ಚೆನ್ನಾಗಿರುತ್ತೆ. ಇದು ನನ್ನ ವೈಯುಕ್ತಿಕ ಅಭಿಪ್ರಾಯ.

ಜಾಗತೀಕರಣ ನಮ್ಮ ಮುಂದಿರುವ ಬಹು ದೊಡ್ಡ ಸವಾಲು. `ಕಾಣದೊಂದು ಹಸ್ತ' ನಮ್ಮನ್ನು ಹೇಗೆ ಸೆಳೆದುಕೊಳ್ಳುತ್ತಿದೆ, ಅದರ ಪರಿಣಾಮಗಳೇನು ಎಂಬುದನ್ನು `ಮುಕ್ತ'ದ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಜಾಗತಿಕರಣವನ್ನು ದಿಟ್ಟವಾಗಿ ಎದುರಿಸ ಬೇಕೆಂದರೆ ಮೊದಲು ನಾವು(ಜನತೆ) ಶಿಸ್ತು ಬದ್ದರಾಗಬೇಕು, ಪ್ರಾಮಾಣಿಕತೆ ಬೆಳೆಸಿಕೊಂಡು ಜಾಗೃತರಾಗಿರಬೇಕು. ನಮ್ಮಲ್ಲಿರುವ ಭ್ರಷ್ಟಾಚಾರವನ್ನು ಪೋಷಿಸಿಕೊಂಡು ಅಥವ ಅದನ್ನು ನಿರ್ಲಕ್ಷಿಸಿ ಜಾಗತಿಕರಣದ ಸವಾಲುಗಳನ್ನು ಎದುರಿಸಲು ಹೊರಟರೆ ನಾವು ಚಕ್ರವ್ಯೂಹದೊಳಗೆ ಸಿಲುಕಿಕೊಳ್ಳಬೇಕಾಗುತ್ತದೆ.ನಮ್ಮ ಅಸ್ತಿತ್ವನ್ನೇ ಕಳೆದುಕೊಳ್ಳುತ್ತೇವೆ. ಜಾಗತಿಕರಣವನ್ನು ನಮ್ಮ ಲಾಭಕ್ಕೆ ಬಳಸಿ ಕೊಳ್ಳಬೇಕೆಂದರೆ ನಮ್ಮಲ್ಲಿ ನಾವು ಶಿಸ್ತು, ಪ್ರಾಮಾಣಿಕತೆ, ಜಾಗೃತಿಯನ್ನು ಬೆಳಸಿಕೊಳ್ಳಬೇಕಾಗುತ್ತದೆ. ಇದಕ್ಕಿಂತ ಮುಂಚೆ ವ್ಯವಸ್ಥೆಯ ಬಗ್ಗೆ ನಮ್ಮಲ್ಲಿರುವ ಸಿನಿಕತನವನ್ನು ತೆಗೆದು ಹಾಕಬೇಕು. ನಮ್ಮನ್ನು ಆಳುವ, ನಿರ್ದೇಶಿಸುವವರನ್ನು ಪ್ರಶ್ನಿಸುವುದನ್ನು ಕಲಿಯಬೆಕು. ಈ ನಿಟ್ಟಿನಲ್ಲಿ ಸೀತಾರಾಂ ಅವರು ಹೊಸ ಪಾತ್ರವನ್ನು ವಹಿಸಬಹುದು.

ಸೀತಾರಾಂ ತಮ್ಮ ಮೊನಚು ಮಾತುಗಳಿಗೆ, ವಿಡಂಬನೆಗೆ, ಅಧ್ಯಯನಶೀಲತೆಗೆ, ಸಮಾಜದ ಅಂಕುಡೊಂಕುಗಳನ್ನು ಕಣ್ಣಿಗೆ ರಾಚುವಂತೆ ತೋರಿಸಲು ಸಮರ್ಥರು. ನಮ್ಮ ರಾಜಕಾರಣಿಗಳನ್ನು, ಆಳುವವರನ್ನು ಸದಾ ಎಚ್ಚರದ ಸ್ಥಿತಿಯಲ್ಲಿ ಇರಿಸಲು ಅವರು ಸಂದರ್ಶನಾಧರಿತ ( ಹಿಂದಿಯ `ಆಪ್ ಕಿ ಅದಾಲತ್ ', ಎನ್ ಡಿ ಟಿ ವಿಯ `ಬಿಗ್ ಫೈಟ್ ' ತರಹ) ಕಾರ್ಯಕ್ರಮಗಳನ್ನು ನಡೆಸಿಕೊಟ್ಟರೆ ಸೀತಾರಾಂ ಕನ್ನಡದ ಕರಣ್ ಥಾಪರ್ ಆಗಬಹುದು. ಅವರ ಪ್ರತಿಭೆ ಮತ್ತು ಜನಪ್ರಿಯತೆಯಿಂದಾಗಿ ಇಂತಹ ಕಾರ್ಯಕ್ರಮ ಯಶಸ್ವಿ ಆಗುವುದರಲ್ಲಿ ಸಂದೇಹ ಇಲ್ಲ.


0 Comments:

Post a Comment

<< Home