Sunday, June 27, 2010

ರೆಡ್ಡಿಯೂರಪ್ಪನವರ exclusive ಸಾಧನೆ!!!

ರೆಡ್ಡಿಯೂರಪ್ಪನವರು ತಮ್ಮ (ಸರ್ಕಾರದಲ್ಲ) ಎರಡು ವರ್ಷದ ಮಹಾನ್ ಸಾಧನೆಯ ಬಗ್ಗೆ ಮೊನ್ನೆ ಸಾಧನ ಸಮಾವೇಶದಲ್ಲಿ ಆನಂದಭಾಷ್ಪದೊಂದಿಗೆ ಆಡಿದ ನುಡಿಮುತ್ತುಗಳಲ್ಲಿ ಒಂದು ಮುತ್ತು(ರೇಣು ಮುತ್ತು ಅಲ್ಲ) ಇಲ್ಲಿದೆ: (exclusively on ತಲೆಹರಟೆ)

..... ಇದುವರೆಗೂ ಯಾವ ಮುಖ್ಯ, ಅಮುಖ್ಯ ಮಂತ್ರಿ, ಕಂತ್ರಿ, ಬೋರೆಗೌಡ, ಹನುಮೆಗೌಡ,ತಿಮ್ಮೆಗೌಡನಾಗಲಿ ಮಾಡದಂತಹ ಸಾಧನೆಯನ್ನು ನಾನು ಮಾಡಿದ್ದೇನೆ.

ಇದುವರೆಗು ನಮ್ಮ ಅಧಿಕಾರಿವರ್ಗಕ್ಕೆ ಸುಸೂತ್ರವಾಗಿ ವ್ಯವಹಾರ ಮಾಡಲು ಅಡ್ಡಿಯಾಗಿದ್ದ ಖಡಕ್ ಹೆಗ್ಡೆಯವರು ರಾಜಿನಾಮೆ ನೀಡುವಂತೆ ಮಾಡಿದ್ದೇನೆ. ಅಧಿಕಾರಿಗಳು ಭಯದ ನೆರಳಲ್ಲಿ ಕೆಲಸಮಾಡಲು ಆಗುವುದಿಲ್ಲ. ಆಗ ಅಭಿವೃದ್ದಿ ಕುಂಟುತ್ತದೆ. ನಮ್ಮ ಅಭಿವೃದ್ಧಿಯೂ ಆಗುವುದಿಲ್ಲ.

ನಾವು ಎಲ್ಲದರಲ್ಲೂ ನಂಬರ್ 1 ಸ್ಥಾನದಲ್ಲಿರಬೇಕು. ಭ್ರಷ್ಟಾಚಾರದಲ್ಲೂ ಸಹ. ಭ್ರಷ್ಟಾಚಾರ ಬಹಳ ಕೆಟ್ಟದು ಹಾಗೆ ಹೀಗೆ ಎಂದು ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಈಗ ಭ್ರಷ್ಟಾಚಾರ ಮೊಬೈಲ್, ಟಿವಿ ಹಾಗೆ ಜೀವನದ ಒಂದು ಭಾಗ ಆಗಿರುವಾಗ ಅದು ಹೇಗೆ ಕೆಟ್ಟದ್ದು? ಪ್ರಪಂಚದ ಹಳೇ ವೃತ್ತಿಯಾದ ವೇಶ್ಯಾವೃತ್ತಿಯನ್ನು ಹೇಗೆ ನಿರ್ಮೂಲನೆ ಮಾಡಲಾಗುವುದಿಲ್ಲವೋ, ಅದೇ ರೀತಿ ಅಷ್ಟೇ ಹಳೆಯಾದಾದ ಭ್ರಷ್ಟಾಚಾರವನ್ನೂ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಅದರೊಂದಿಗೆ ಸಹಜೀವನ ನಡೆಸುವುದನ್ನು ನಾವು ಕಲಿಯಬೇಕು. ಭ್ರಷ್ಟಾಚಾರವಿಲ್ಲದೆ ಈ ದುಬಾರಿ ಕಾಲದಲ್ಲಿ ನಾವು ಸರ್ಕಾರಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲ.......

(ದಯವಿಟ್ಟು ಕ್ಷಮಿಸಿ, ಇದು ತಮಾಷೆಗಲ್ಲ...)

Friday, February 09, 2007

Hard disk ಗೌಡರ ಮೌನವೄತ ಮತ್ತು ಮಾಜಿಯ 'ಕಾವೇರಿ'ದ ಜೋಕು!!!!

ಕಾವೇರಿ ವಿಷಯದಲ್ಲಿ ಯಾರ್ ಯಾರು ಎಷ್ಟೆಷ್ಟು ಉಗ್ರವಾಗಿ ಖಂಡಿಸುತ್ತಿದ್ದಾರೆಂದು ಅವರವರೆ ವಿಷ್ಲೇಶಿಸಿಕೊಳ್ಳುತ್ತಿರುವ ಈ 'ಕಾವೇರಿ'ದ ಸಂದರ್ಭದಲ್ಲಿ, ಹಾಲಿ 'ಮಾಜಿ ಪ್ರಧಾನಮಂತ್ರಿ' Hard disk(H D) ದೇವೆಗೌಡರು ಮೌನ ವ್ರತ ಆಚರಿಸುವುದರ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆಯೆಂದು ತಿಳಿದು ಬಂದಿದೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳದೆ 'ವೄತ್ತಿಪರ' ವಿರೋಧಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ಗೌಡರು ತಮ್ಮ ಮೌನ ಹೇಳಿಕೆಯ ಮೂಲಕ ದೂರಿದ್ದಾರೆ.

ಈ ಮಧ್ಯೆ, ಕಾವೇರಿಗೆ ಸಂಬಂಧಿಸಿದ ಕರ್ನಾಟಕದೊಂದಿಗಿನ ತನ್ನ ವ್ಯಾಜ್ಯಕ್ಕೆ 'ಪರಿಹಾರ' ದೊರೆತ ನಂತರ ತಮಿಳುನಾಡಿನಲ್ಲಿ ಅಲ್ಲಿಯ ಮಾಜಿ ಮತ್ತು ಹಾಲಿ ಮುಖ್ಯ ಮಂತ್ರಿಗಳ ಮದ್ಯೆ ಇದೇ ವಿಷಯ ಹೋಸ ತಿರುವು ಪಡೆದುಕೊಂಡಿದೆ. ಕಾವೇರಿ ತೀರ್ಪು ತಮಗೆ ಸಮಾಧಾನ ತಂದಿಲ್ಲ ಎಂದು 'ಮಾಜಿ'ಯು ತರಲೆ ತೆಗೆದಿರುವುದಕ್ಕೆ 'ಹಾಲಿ'ಯು, " 'ದೊಡ್ಡ' ಜನರಿಗೆ ಎಷ್ಟು ಕೊಟ್ಟರು ಸಾಲುವುದಿಲ್ಲ. ಮಾಜಿಯ ತಗಾದೆಯನ್ನು ಜೋಕ್ ಆಗಿ ತೆಗೆದುಕೊಳ್ಳಿ" ಎಂದು ಪ್ರತಿಕ್ರಿಯಿಸಿದ್ದಾರೆ. ಇಲ್ಲಿ 'ದೊಡ್ಡ' ಪದವು ಮಾನಸಿಕ ಅರ್ಥದಲ್ಲಿ ಬಳಕೆಯಾಗಿದೆಯೋ ಅಥವ 'ದೈಹಿಕ' ಅರ್ಥದಲ್ಲಿ ಬಳಕೆಯಾಗಿದಿಯೋ ಎಂಬುದು ಇದುವರಗೆ ತಿಳಿದು ಬಂದಿಲ್ಲ.

Tuesday, January 30, 2007

ಐಶ್ ಮದುವೆಯ multi effects!!!!!

2010ರಲ್ಲಿ ವಿಶ್ವದಾದ್ಯಂತ ದೂರ ಸಂಪರ್ಕ ಸ್ಥಗಿತಗೊಳ್ಳುತ್ತದೆಯಂತೆ. ಸೂರ್ಯನ ಉಜ್ವಲ ಕಿರಣದಿಂದಾಗಿ ಹೀಗಾಗುತ್ತದೆಯೆಂದು ಹೇಳಲಾಗಿದೆ. ಆದರೆ ಈ ಫೆಬ್ರವರಿ 27 ರಂದು ನಮ್ಮ ಸುದ್ದಿ ಮಾಧ್ಯಮಗಳ ಮೇಲೆ ಪ್ರಭಾವ ಬೀರಬಲ್ಲ ಘಟನೆಯ ಬಗ್ಗೆ ಎಲ್ಲೂ ವರದಿಯಾಗಿಲ್ಲ.

ಅಂದು 'ಐಶ್ ಮದುವೆ' ಎಂಬ ಘಟನೆಯ ತೀಕ್ಷಣ ಪ್ರಭಾವದಿಂದಾಗಿ ಇತರೆ ಎಲ್ಲಾ ಸುದ್ದಿಗಳು ಪತ್ರಿಕೆಗಳಲ್ಲಿ, ಟಿ ವಿ ಚಾನೆಲ್ ಗಳಲ್ಲಿ ಮೂಲೆಗುಂಪಾಗಲಿವೆ. ರಾಜಕಾರಣಿಗಳು,ನೇತಾರರು ಅಂದು ಯಾವುದೇ ಹೇಳಿಕೆಗಳಾಗಲಿ, ವಿರೋಧಿಗಳ ವಿರುದ್ದ ಆರೋಪ ಮಾಡುವುದಾಗಲಿ, ಹೊಸ ಯೋಜನೆ,ಯೋಚನೆಗಳನ್ನು ಪ್ರಕಟಿಸುವುದಾಗಲಿ ಮಾಡುವುದಿಲ್ಲವಂತೆ. 'ಐಶ್ ಮದುವೆ'ಯ ಮಂಗಳ ವಾದ್ಯದ ಅಬ್ಬರದಲ್ಲಿ ಇವರ ಕಿರುಚಾಟ ಕೇಳಿಸುವುದಿಲ್ಲವಾದ್ದರಿಂದ ಎಲ್ಲರೂ ಸರ್ವಸಮ್ಮತದಿಂದ ಈ ನಿರ್ಣಯ ಕೈಗೊಂಡಿದ್ದಾರೆ.

ಈ ಮಧ್ಯೆ, 'ಅಖಿಲ ಭಾರತ ವಿರಹಿಗಳ ಪಕ್ಷ' ಅಸ್ತಿತ್ತ್ವಕ್ಕೆ ಬಂದಿದ್ದು ಹಾಲಿ ನಟ ಹಾಗು ಮಾಜಿ 'ಐಶ್ ಪ್ರೇಮಿ' ಸಲ್ಮಾನ್ ಖಾನ್ ಈ ಪಕ್ಷದ ಅಧ್ಯಕ್ಷರಾಗಿ ಹಾಗು ಇನ್ನೊಬ ನಟ ವಿವೇಕ್ ಒಬೆರಾಯ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಈ ಪಕ್ಷದ ಕರ್ನಾಟಕ ರಾಜ್ಯ ಘಟಕಕ್ಕೆ ರವಿ ಬೆಳಗೆರೆ ಸಾರಥ್ಯ ವಹಿಸಿಕೊಂಡಿದ್ದಾರೆ.

ನಿನ್ನೆ ಮುಂಬಯಿ ಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಟಿಯಲ್ಲಿ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮಾತಾಡುತ್ತ ರಾಷ್ಟ್ರಧ್ಯಕ್ಷರು, ಫೆಬ್ರವರಿ 14(ಪ್ರೇಮಿಗಳ ದಿನ)ನ್ನು ಕರಾಳದಿನವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ. ಅಂದು ಬೆಂಗಳೂರಿನಲ್ಲಿ ವಿರಹಿಗಳಿಗೆ ಸಾಂತ್ವನದ ಮಾತುಗಳಿರುವ ಸಿ ಡಿಯನ್ನು ರವಿ ಬೆಳಗೆರೆ ಬಿಡುಗಡೆ ಮಾಡಲಿದ್ದಾರೆ ಎಂದೂ ತಿಳಿಸಿದರು.

ಈ ಬಾರಿಯ ಪ್ರೇಮಿಗಳ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲು ಕರೆ ನೀಡಿರುವುದರಿಂದ ಅಂದು ಆಗಲಿದ್ದ ಭರ್ಜರಿ ವಹಿವಾಟಿಗೆ ಕೊಡಲಿ ಪೆಟ್ಟು ಬಿದ್ದಿದೆ. ಪ್ರೇಮಿಗಳ ದಿನವನ್ನು ಬಂಡವಾಳವಾಗಿಸಿಕೊಂಡಿದ್ದ ವಾಣಿಜ್ಯ ಸಂಸ್ಥೆಗಳು ಅಪಾರ ನಷ್ಟ ಅನುಭವಿಸುವ ಸೂಚನೆ ಕಂಡು ಬಂದಿದೆ.

ಹೊಸದಾಗಿ ಪ್ರಾರಂಭ ಆಗಿರುವ 'ಅಖಿಲ ಭಾರತ ವಿರಹಿಗಳ ಪಕ್ಷ' ದೇಶದ ರಾಜಕಾರಣದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದೆ. ಇದರಿಂದ ರಾಜಕೀಯ ಕ್ಷೇತ್ರದಲ್ಲಿ ಯಾವ ತರಹ ಬದಲಾವಣೆಗಳಾಗಬಹುದೆಂದು ಕಾದು ನೋಡಬೇಕಾಗಿದೆ ಎಂದು ರಾಜಕೀಯ ವಿಮರ್ಶಕರು, ಚಿಂತಕರು,ಚಿಂತಿತರು ಅಭಿಪ್ರಾಯ ಪಟ್ಟಿದ್ದಾರೆ.

Sunday, January 21, 2007

ಸ್ಫೋಟಕ ಸುದ್ಧಿ?!!!!!!!!!!!!!!!!!!!

ಇಷ್ಟು ದಿನ ನಿಗೂಢವಾಗಿ ಮಾಯವಾಗಿದ್ದ ತಲೆಬುರುಡೆ ಸಿಕ್ಕಿದೆ. ಮೈ ಕೊಡವಿಕೊಳವಿಕೊಂಡು ಸದ್ಯದಲ್ಲೆ ಇಲ್ಲಿ ಪ್ರತ್ಯಕ್ಷವಾಗಲಿದೆ.
ತನ್ನ ನಿಗೂಢ ಕಣ್ಮರೆಯ ಹಿಂದೆ ಇರುವ ಕಾಣದ, ಕಾಣಿಸುವ,ಕಂಡು ಮರೆಯಾದ ಕೈಗಳ 'ತನಿಖಾ ವರದಿ' ಗಳನ್ನು ಮುಂದಿನ ಎರಡು ಮೂರು ಸಂಚಿಕೆಗಳಲ್ಲಿ ಪ್ರಕಟಿಸುವುದಾಗಿ ನಿಗೂಢ ಲೋಕದಿಂದ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

Saturday, July 15, 2006

ಲೋಕಾಯುಕ್ತರಿಂದ ಭ್ರಷ್ಟಾಚರಕ್ಕೆ ಕುಮ್ಮಕ್ಕು?!

ದಯವಿಟ್ಟು ಕ್ಷಮಿಸಿ. ಅಮುಖ್ಯಮಂತ್ರಿ ಕುಮಾರ ಕಂಠೀರವ ಸಂದರ್ಶನಕ್ಕಾಗಿ ಹೋಗಿದ್ದೆ ಆದ್ದರಿಂದ ಇಷ್ಟುದಿನ ಇಲ್ಲಿ ತಲೆಹರಟೆ ಮಾಡಲಾಗಲಿಲ್ಲ. ಎಷ್ಟು ಕಾಡಿದರು ಬೇಡಿದರೂ ಅವರು ಸಂದರ್ಶನ ಕೊಡಲಿಲ್ಲ. ಆದರೆ ಅಲ್ಲಿಗೆ ಹೋದುದರಿಂದ ಒಂದೆರಡು ಮಾಹಿತಿಗಳು ಸಿಕ್ಕಿವೆ. ಅದನ್ನಿಲ್ಲಿ ನಿಮಗಾಗಿ ಪ್ರಕಟಿಸುತ್ತಿದ್ದೇನೆ.

ಮಾಜಿ ಲೋಕಾಯುಕ್ತ ವೆಂಕಟಚಲ ಅವರನ್ನು ಮುಂದುವರಿಸದಿರುವುದಕ್ಕೆ ಅವರ ವಯಸ್ಸು ಪ್ರಮುಖ ಕಾರಣವಾಗಿದೆ. ಈ ಇಳಿವಯಸ್ಸಿನಲ್ಲೂ ವೆಂಕಟಚಲ ಯುವಕರನ್ನು ನಾಚಿಸುವಸ್ಟು 'ಕೆಲಸ' ಮಾಡುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆಯೆಂದು 'ಲೆಕ್ಕಾಚಾರ' ಹಾಕಿ ಮಾನ್ಯ ಅಮುಖ್ಯಮಂತ್ರಿಯವರು ಲೋಕಾಯುಕ್ತರನ್ನು ಮುಂದುವರಿಸದಿರುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಇನ್ನೊಂದು ಕಾರಣವೇನೆಂದರೆ, ಅವರನ್ನು ಆ ಹುದ್ದೆಯಲ್ಲಿ ಮುಂದುವರಿಸಿದರೆ ರಾಜ್ಯದಲ್ಲಿ ಭ್ರಷ್ಟಾಚಾರ ಕಡಿಮೆಯಾಗುವ ಬದಲು ಇನ್ನೂ ಹೆಚ್ಚಾಗುವ ಸಂಭವ ಇತ್ತು!

ಭ್ರಷ್ಟಾಚಾರಿಗಳ ಮದ್ಯೆ ಒಂದು ಅಘೋಷಿತ ಸ್ಪರ್ಧೆ ಇದೆ. ಇಲ್ಲಿ ಪ್ರತಿ ಭ್ರಷ್ಟಾಚಾರಿ ಭ್ರಷ್ಟಾಚಾರದ ವಿಷಯದಲ್ಲಿ ಇನ್ನೊಬ್ಬನನ್ನು ಮೀರಿಸುವ ಹುಚ್ಚನ್ನು ಬೆಳಿಸಿಕೊಂಡಿರುತ್ತಾನೆ. ಒಬ್ಬ ಎಷ್ಟು ತಿಂದಿದ್ದಾನೆ ಎಂದು ಗೊತ್ತಾದರೆ ಸಾಕು, ತಾನು ಅವನಿಂಗಿಂತ ಎರಡು ಪಟ್ಟು ತಿನ್ನಬೇಕೆಂದು ಪಣ ತೊಟ್ಟು 'ಕಾರ್ಯ'ಮಗ್ನನಾಗುತ್ತಾನೆ. ಪರಿಸ್ಥಿತಿ ಹೀಗಿರುವಾಗ ವೆಂಕಟಚಲರವರು ಎಲ್ಲಾ ಭ್ರಷ್ಟರ ಒಟ್ಟು 'ಕಮಾಯಿ'ಯ ಸಾರ್ವಜನಿಕ ಪ್ರದರ್ಶನ ಏರ್ಪಡಿಸಿದರೆ ಉಳಿದ ಭ್ರಷ್ಟಾಚರಿಗಳು ಪ್ರದರ್ಶಿಸಲ್ಪಟ್ಟ ಮೊತ್ತದ ದುಪ್ಪಟ್ಟು 'ದುಡಿಯಲು' ಪೈಪೋಟಿಗಿಳಿದು ಸಹಜವಾಗಿ ಭ್ರಷ್ಟಾಚಾರ ಬೆಳೆಯುತ್ತೆ ಹಾಗಾಗಿ ವೆಂಕಟಚಲರವರು ನಿವೃತ್ತಿ ಜೀವನಕ್ಕೇ ಲಾಯಕ್ಕು ಎಂದು ತೀರ್ಮಾನಿಸಿದ್ದಾರೆ.

ಭ್ರಷ್ಟಾಸುರ ಝಿಂದಾಬಾದ್!!!!!

Friday, June 09, 2006

ತಲೆಬುರುಡೆಗೆ ಪಿಂಕ್ ಸ್ಲಿಪ್?!

ಆತ್ಮೀಯ ನೆಟ್ ಅಲೆಮಾರಿಗಳೆ ಹಾಗು ಇತರರೆ,

ಬದಲಾವಣೆ ಈ ಜಗದ ನಿಯಮ. ಅನಾದಿಕಾಲದಿಂದ ಇಂದಿನವರೆಗೆ ಏನೇನೊ ಬದಲಾಗಿದೆ. ಆದರೆ ಬದಲಾಗದಿರುವುದು ಈ ನಿಯಮ ಮಾತ್ರ.

ಬದಲಾವಣೆ ಈ ಜಗದ ನಿಯಮ ಎನ್ನುವುದನ್ನು ಈಗಿನ ಆಧುನಿಕ ಕಾಲದವರು ಚೆನ್ನಾಗಿ ಮನದಟ್ಟು ಮಾಡಿಕೊಂಡಿದ್ದಾರೆ. ಹಾಗಾಗಿ ರಾಜಕಾರಣಿಯಿಂದ ಜನಸಾಮಾನ್ಯನವರೆಗೂ, ಮೊಟಾರು ಕಂಪನಿಯವರಿಂದ ಹಿಡಿದು ಮೊಬೈಲ್ ಕಂಪನಿಯವರವರೆಗೂ ಈ ನಿಯಮ ಚಾಚು ತಪ್ಪದೆ ಪಾಲಿಸಲಾಗುತಿದೆ. ಇವರಲ್ಲಿ ರಾಜಕಾರಣಿಗಳು ಮುಂಚೂಣಿಯಲ್ಲಿದ್ದಾರೆ. ಇವತ್ತು ಈ ಪಕ್ಷ, ನಾಳೆ ಇನ್ನೊಂದು. ಅದರ ನಂತರ ತಮ್ಮದೇ ಹೊಸತೊಂದು!

ಜನಸಾಮಾನ್ಯನ ವಿಷಯಕ್ಕೆ ಬಂದರೆ, ಇವತ್ತು Nokia2600 handset ಒಂದಿಷ್ಟು ದಿನಗಳ ನಂತರ ನೀಲಿ ಹಲ್ಲು(blue tooth) ಇರುವ ಮೊಬೈಲ್. ಒಂದಿಷ್ಟು ತಿಂಗಳ ನಂತರ ಅದಕ್ಕಿಂತ advanced set. ಒಂದಿಷ್ಟು ದಿನ Spice ಜತೆ ಚೆಲ್ಲಾಟ, ಮುಂದೆ Airtel ನೊಂದಿಗೆ ಚಕ್ಕಂದ. ಅದಾದ ಮೇಲೆ Hutch ನ ಸಹವಾಸ.

ಇನ್ನು ಜನ'ಅಸಾಮಾನ್ಯರ' ವಿಷಯ: ಇಂದು ಇವಳೊಂದಿಗೆ / ಇವನೊದಿಗೆ 'ಒಡನಾಟ', ನಾಳೆ ಇನ್ನ್ಯಾರಿಗೋ ಆ ಸ್ಥಾನ. ಮುಂದೊಂದು ದಿನ ಮತ್ತ್ಯಾರೊಂದಿಗೊ ಜೀವನ 'ಹಂಚಿಕೆ'!!!!

'ತಲೆಹರಟೆ'ಗೂ ಈ ನಿಯಮದಿಂದ ವಿನಾಯಿತಿ ಇಲ್ಲ. ನೀವೆಲ್ಲಾ ಈ ಬ್ಲಾಗ್ ನಿವೇಶನಕ್ಕೆ ಭೇಟಿ ಕೊಟ್ಟು, ಅಭಿಪ್ರಾಯಗಳನ್ನು ದಾಖಲಿಸಿ,ಮೆಚ್ಚುಗೆಯ ಮಾತನ್ನು ಆಡಿ ಪ್ರೋತ್ಸಾಹಿಸಿದ್ದೀರಿ. ಇದಕ್ಕೆ ನಾನು ನಿಮಗೆ ಚಿರಋಣಿ. ಇಲ್ಲಿ ಪಕ್ಕದಲ್ಲಿರುವ ತಲೆಬುರುಡೆ ಇಷ್ಟು ದಿನಗಳ ನಂತರ ಅದೇಕೊ irritating  ಅನ್ನಿಸುತ್ತಿದೆ. ಇಷ್ಟು ದಿನ ಈ ನಿವೇಶನದ ಮೇಲೆ ಯಾರ 'ದೃಷ್ಟಿಯೂ ಬೀಳದಂತೆ' ನೋಡಿಕೊಂಡಿದಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿ ಒಂದು ಪಿಂಕ್ ಸ್ಲಿಪ್ ನೀಡಬೇಕೆಂದುಕೊಂಡಿದ್ದೇನೆ. ನನಗೆ ಇದರ ಬಗ್ಗೆ ನಿಮ್ಮ ಅಭಿಪ್ರಾಯದ ತೀವ್ರ ಅವಶ್ಯಕತೆ ಇದೆ. ಈ ತಲೆಬುರುಡೆ ಇಲ್ಲಿರುವುದರಿಂದ ನಿಮಗೇನು ಅನ್ನಿಸಿದೆ, ಇದನ್ನು ಬದಲಾಯಿಸಬೇಕಾ ಅಥವ ಅದರಪಾಡಿಗೆ ಅದನ್ನು ಅಲ್ಲಿಯೇ ಬಿಡಬೇಕಾ? ಎಂದು ತಿಳಿಸಬೇಕಾಗಿ ವಿನಂತಿ.

ಇಂತಿ
ತಲೆಹರಟೆ

Tuesday, June 06, 2006

ಆಷ್ಟ್ರೇಲಿಯನ್ನರು: ಭಾರತದ ಜನಸಂಖ್ಯೆ ಹೆಚ್ಚಳಕ್ಕೆ ಕಾರಣರು

ತಲೆಹರಟೆ ಹೆಸರಿನ ಈ ಲದ್ದಿಗಾರನಿಗೆ ಬಹಳ ಸಂತೋಷವಾಗಿದೆ. ತನ್ನ ಗಂಭೀರ ಮಾತುಗಳನ್ನು ತಮಾಷೆಯಾಗಿ, ತಮಾಷೆ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದು ಸಿಕ್ಕಸಿಕ್ಕವರೆಲ್ಲಾ ಬಳಿ ಗೊಣಗುತ್ತಿದ್ದವನಿಗೆ ಇತ್ತಿಚಿಗೆ ಸಿಕ್ಕ ಪುಟ್ಟ ಸುದ್ಧಿಯೊಂದು ಈ ಸಂತೋಷಕ್ಕೆ ಕಾರಣ.

ಪೀಟರ್ ಕಾಸ್ಟಿಲ್ಲೊ ಎಂಬ ಆಸ್ಟ್ರೇಲಿಯದ ಪ್ರಮುಖ ವ್ಯಕ್ತಿ ಒಬ್ಬ ೧೯೯೨ ರಲ್ಲಿ ಆಸ್ಟ್ರೆಲಿಯನ್ ಜನತೆಯನ್ನು ಕುರಿತು "ದಂಪತಿಗಳು ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯಬೇಕು. ಒಂದು ಮಗು ಪಪ್ಪನಿಗೆ, ಒಂದು ಮಮ್ಮಿಗೆ ಇನ್ನೊಂದು ದೇಶಕ್ಕೆ.." ಎಂದು ತಮಾಶೆಗೆ ಹೇಳಿದ ಮಾತು ಈಗ ಗಂಭೀರ ಸಮಸ್ಯೆ ಉಂಟುಮಾಡಿದೆ!!

೧೯೯೨ ರಿಂದ ಈಚೆಗೆ ೨೦೦೫ರಲ್ಲಿ ಮೊದಲಬಾರಿಗೆ ೨೬೧೪೦೦ ಮಕ್ಕಳು ಇಲ್ಲಿ ಜನಿಸಿದ್ದಾರೆ. ಇದು ಅಲ್ಲಿಯ ಸರಕಾರಕ್ಕೆ ತಲೆನೊವಾಗಿ ಪರಿಣಮಿಸಿದೆ. ಹೀಗಾಗಿ ಅಲ್ಲಿಯ ಸರ್ಕಾರ "ರಾಷ್ಟ್ರದ ಹಿತದೃಷ್ಟಿಯಿಂದ ಹಾಗು ರಾಷ್ಟ್ರ ಪ್ರೇಮದ ಸಲುವಾಗಿ ಒಂದೇ ಮಗು ಪಡೆಯಿರಿ" ಎಂದು ತನ್ನ ಜನತೆಯಲ್ಲಿ ವಿನಂತಿಸಿಕೊಂಡಿದೆ.

ಈ ಮಧ್ಯೆ,ಆಷ್ತ್ರೇಲಿಯನ್ ಜನತೆ ತನ್ನ ತಮಾಷೆ ಮಾತನ್ನು ಇಷ್ಟು ಗಂಭೀರವಾಗಿ ತೆಗೆದುಕೊಡಿರುವುದು ತನಗೆ ಆಶ್ಚರ್ಯವಾಗಿದೆ ಎಂದು ಪೀಟರ್ ಕಾಸ್ಟಿಲ್ಲೊ ಹೇಳಿಕೊಂಡಿದ್ದಾನೆ. ಆಶ್ಟ್ರೇಲಿಯನ್ ಸರ್ಕಾರದ 'ಒಂದೇ ಮಗು ಸಾಕು' ಎಂಬ ಗಂಭೀರ ಕರೆಯನ್ನು ಅಲ್ಲಿಯ ಜನ ತಮಾಷೆ ಎಂದು ಭಾವಿಸದಿರಲಿ ಎಂಬುದು ತಲೆಹರಟೆಯ ಆಶಯ.

(೨೦೦೫ ರಲ್ಲಿ ಭರತದ ಜನಸಂಖ್ಯೆ ಎಂದಿಗಿಂತ 'ಅತಿ' ಹೆಚ್ಚಾಗಿದ್ದರೆ ಅದಕ್ಕೆ ಭಾರತಿಯರಾದ ನಾವು ಕಾರಣರಲ್ಲ! ಏಕೆಂದರೆ  ಜನಸಂಖ್ಯಾ ತಜ್ಞರ ಪ್ರಕಾರ ಭಾರತದ ಜನಸಂಖ್ಯೆಗೆ ಪ್ರತಿವರ್ಷ ಒಂದು ಆಸ್ಟ್ರೇಲಿಯ ಸೇರ್ಪಡೆಯಾಗುತ್ತಿದೆಯಂತೆ. ಹಾಗಾಗಿ ಆಶ್ತ್ರೇಲಿಯದ ಜನಸಂಖ್ಯೆ ಹೆಚ್ಚಾದರೆ ಸಹಜವಾಗಿ ಭಾರತದ ಜನಸಂಖ್ಯೆಯೂ ಅಷ್ಟೇ ಹೆಚ್ಚಬೆಕಲ್ಲವೇ?)